ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸ೦ಘ - ಸ೦ಸ್ಥೆ
Share
ರಾಜಧಾನಿ ಬೆ೦ಗಳೂರಿನ ಯಕ್ಷಗಾನ ಗುರುಕುಲ “ಯಕ್ಷದೇಗುಲ”
ಲೇಖಕರು :
ಕೋಟ ಸುದರ್ಶನ ಉರಾಳ
ಶನಿವಾರ, ಆಗಸ್ಟ್ 30 , 2014

ಬೆಂಗಳೂರು ಮಹಾನಗರದ ಪ್ರೇಮಿಗಳಿಗೆ “ಯಕ್ಷದೇಗುಲ” ಎಂದರೆ ಏನೆಂದು ತಿಳಿಹೇಳಬೇಕಿಲ್ಲ. ಹಾಗೆಯೇ ‘ಯಕ್ಷದೇಗುಲ’ದ ಸಂಘಟಕ ಪ್ರಮುಖರಾದ ಮೋಹನ ಹೊಳ್ಳ ಎಂದರೆ ಯಾರೆಂದೂ ಪರಿಚಯಿಸಬೇಕಾಗಿಲ್ಲ. 34 ವರ್ಷಗಳ ಹಿಂದೆ ಅತಿಥಿ ಕಲಾವಿದರಿಂದ ಯಕ್ಷಗಾನ ಪ್ರದರ್ಶನದೊಂದಿಗೆ ಪ್ರಾರಂಭವಾದ ಯಕ್ಷದೇಗುಲ ಕ್ರಮೇಣ ಬೆಂಗಳೂರು ನಗರದ ಹವ್ಯಾಸೀ ಕಲಾವಿದರನ್ನು ಒಂದು ಕಡೆ ಸೇರಿಸಿ ಪ್ರದರ್ಶನ ನೀಡುವ ಮಟ್ಟಕ್ಕೆ ಹೋಗಿ ತನ್ನದೇ ಖಾಯಂ ಕಲಾವಿದರನ್ನು ಹೊಂದುವ ಮೂಲಕ ನಗರದ ಉತ್ತಮ ಯಕ್ಷಗಾನ ತಂಡವಾಗಿ ಹೊರಹೊಮ್ಮಿ ಕಳೆದ 9 ವರ್ಷದ ಹಿಂದೆ ಬೆಳ್ಳಿಹಬ್ಬವನ್ನು ಆಚರಿಸಿಕೊಳ್ಳುವಷ್ಟರವರೆಗೆ ಮುಟ್ಟಿದುದು ಯಕ್ಷಗಾನ ರಂಗಭೂಮಿಯ ಸಂಘಟನೆಯ ಇತಿಹಾಸದ ಒಂದು ಮುಖ್ಯ ಅಧ್ಯಾಯ.

ನಗರ ಪ್ರದೇಶಗಳಲ್ಲಿ “ಸಂಘಟನೆ” ‘ಕಲಿಕೆ’ ಮತ್ತು ಪ್ರದರ್ಶನಗಳಿಗೆ ಒಂದು ಕಾರ್ಪೋರೇಟರ್ ಸಂಸ್ಕೃತಿಯನ್ನು ಒದಗಿಸಿದವರು “ಯಕ್ಷದೇಗುಲ”ದ ಕೆ. ಮೋಹನ್ ಅಥವಾ ಮೋಹನ ಹೊಳ್ಳ. “ಯಕ್ಷದೇಗುಲ”ದ ಬ್ಯಾನರಿನಿಂದ ಹಿಡಿದು ಕರಪತ್ರ ವೇಷ ಭೂಷಣಗಳು ಈ ಸಂಗತಿಯನ್ನು ಧೃಡಪಡಿಸುತ್ತವೆ. ಈ ದೃಷ್ಟಿಕೋನವೇ ಇಷ್ಟು ವರ್ಷಗಳ ಕಾಲ ಅವರ “ಯಕ್ಷದೇಗುಲ” ಜೀವಂತಿಕೆಯನ್ನು ಉಳಿಸಿಕೊಂಡಿರುವುದು. ಈ ನಿಟ್ಟಿನಲ್ಲಿ ಯಕ್ಷದೇಗುಲದ ಅಧ್ಯಕ್ಷರಾದ ಬಾಲಕೃಷ್ಣ ಭಟ್ಟರ ಕೊಡುಗೆ ಬಹಳ.

ನುರಿತ ಕಲಾವಿದರಲ್ಲಿಯೇ ಇಂದು ಯಕ್ಷಗಾನದ ವಿವಿಧ ಅಂಗೋಪಾಂಗಗಳ ಕುರಿತು ಸೈದ್ಧಾಂತಿಕ ಗೊಂದಲವನ್ನು ಕಾಣುತ್ತೇವೆ. ಅದು ಅವರ ತಂಡದ ಪ್ರದರ್ಶನ , ಮಾತು, ಕುಣಿತ, ಹಿಮ್ಮೇಳ, ವೇಷಭೂಷಣ ಇವುಗಳಲ್ಲಿ ಪರೋಕ್ಷವಾಗಿ ವ್ಯಕ್ತವಾಗುತ್ತಿರುತ್ತದೆ. ಆದರೆ ಯಕ್ಷದೇಗುಲದ ಪ್ರಯೋಗದಲ್ಲಿ ಇಂತಹ ಸೈದ್ಧಾಂತಿಕ ಗೊಂದಲಗಳಿಂದ ಪ್ರದರ್ಶನಗಳು ಮುಕ್ತವಾಗಿರುವಂತೆ ಎನಿಸುತ್ತದೆ.

ಯಕ್ಷಗಾನ ಪ್ರದರ್ಶನ ಮಾತ್ರವಲ್ಲದೇ ಯಕ್ಷಗಾನ ಕುರಿತಾದ ಕಾರ್ಯಾಗಾರ, ತರಬೇತಿ, ಶಾಲಾ ಕಾಲೇಜುಗಳಲ್ಲಿ ಯಕ್ಷಗಾನ ಕಮ್ಮಟ, ಹಿರಿಯ ಯಕ್ಷಗಾನ ಕಲಾವಿದರಿಗೆ ಸನ್ಮಾನ, ಯಕ್ಷಗಾನ ಉತ್ಸವ, ಹೀಗೆ ಚಟುವಟಿಕೆಗಳು ವಿಸ್ತೃತವಾಗಿ ಕವಲೊಡೆದು ಕನಿಷ್ಠ ವರ್ಷಕ್ಕೊಂದರಂತೆ ಹೊಸದಾಗಿ ಪೌರಾಣಿಕ ಯಕ್ಷಗಾನ ಪ್ರಸಂಗವನ್ನು ಸಿದ್ಧಗೊಳಿಸಿ ಪ್ರದರ್ಶಿಸುತ್ತಾ ನೂರಾರು ಕಲಾಸಕ್ತರಿಗೆ ಉಚಿತವಾಗಿ ಯಕ್ಷಗಾನ ಕಲಿಸಿದ ಹಾಗೂ ಕಲಿಸುವ ಗುರುಕುಲ ಈ “ಯಕ್ಷದೇಗುಲ”. ವಿದ್ಯಾಸಂಸ್ಥೆ, ಸಂಘಸಂಸ್ಥೆಗಳಿಗೆ ತೆರಳಿ ಯಕ್ಷಗಾನ ಹೇಳಿಕೊಡುವ ಮೂಲಕ ರಾಜಧಾನಿ ನಗರದಲ್ಲಿ ಯಕ್ಷಗಾನಕ್ಕೊಂದು ಬೆಳವಣಿಗೆಯ ಹಾದಿಯನ್ನು ಪ್ರಪ್ರಥಮವಾಗಿ ಹಾಕಿಕೊಟ್ಟಿದೆ. ಹಾಗೆಯೇ ಬೆಂಗಳೂರು ಮಾತ್ರವಲ್ಲದೇ ಉಡುಪಿ ಜಿಲ್ಲೆಯ ಎರಡು ಪ್ರಾಥಮಿಕ ಶಾಲೆಯಲ್ಲಿ ನಿರಂತರ ಯಕ್ಷಾಭ್ಯಾಸವನ್ನು ತೊಡಗಿಸಿಕೊಂಡಿದೆ. ಪ್ರತಿ ವರ್ಷವೂ ಕೋಟದಲ್ಲಿ ಉಚಿತವಾಗಿ 7 ದಿವಸದ ಯಕ್ಷಗಾನ ನೃತ್ಯ, ಪೌರಾಣಿಕಕತೆ ಮತ್ತು ಮೇಕಪ್ ಶಿಬಿರವನ್ನು ನಡೆಸಿಕೊಂಡು ಬಂದಿದೆ.

ವಿಳಾಸ : ಯಕ್ಷದೇಗುಲ
143/73, 6ನೇ ಅಡ್ಡ ರಸ್ತೆ
3ನೇ ಬ್ಲಾಕ್, ತ್ಯಾಗರಾಜ ನಗರ
ಬೆ೦ಗಳೂರು - 560028
ಕರ್ನಾಟಕ ರಾಜ್ಯ

No.143/73, 6TH Cross
3RD Block, Thyagaraja Nagar
Bangalore - 560028
ಮೊಬೈಲ್ : 91 9844008651
ಯಕ್ಷಗಾನದಲ್ಲಿ ಕಿರಿಯರ ತೊಡಗುವಿಕೆಗೆ ವಿಶೇಷ ಮಹತ್ವ ನೀಡಿದ ಸಂಸ್ಥೆ ಕಿರಿಯರಿಗೆ ಯಕ್ಷಗಾನದಲ್ಲಿ ನಶಿಸಿಹೋಗುತ್ತಿರುವ ಬಾಲಗೋಪಾಲ, ಪಾಂಡವರ ಒಡ್ಡೋಲಗ, ಪೀಠಿಕಾಸ್ತ್ರೀವೇಷ, ಕೋಡಂಗಿ ಹಾಸ್ಯ ಮತ್ತು ನೃತ್ಯ, ಯುದ್ಧಕುಣಿತ, ಬಣ್ಣದ ಒಡ್ಡೋಲಗ, ಪ್ರಯಾಣ ಕುಣಿತ, ಕೃಷ್ಣನ ಒಡ್ಡೋಲಗ ಹೀಗೆ ನಶಿಸಿಹೋಗುತ್ತಿರುವ ಯಕ್ಷಗಾನದ ಕೆಲವು ಸಂಪ್ರದಾಯಗಳನ್ನು ಕಲಿಸುವುದಲ್ಲದೇ ವೀರವೃಷಸೇನ, ಲವಕುಶಕಾಳಗ, ಚಕ್ರವ್ಯೂಹ, ಏಕಲವ್ಯ, ದ್ರುಪದ ಗರ್ವಭಂಗ, ಕಂಸವಧೆ, ರತ್ನಾವತಿ ಕಲ್ಯಾಣ, ಕೃಷ್ಣಾರ್ಜುನ ಕಾಳಗ ಪ್ರಸಂಗಗಳನ್ನು ಮಕ್ಕಳಿಂದಲೇ ಪ್ರದರ್ಶಿಸಿ ಹಲವು ಪ್ರದರ್ಶನ ಕಂಡು ವಿಶಿಷ್ಟ ಸಾಧನೆ ಮಾಡಿದೆ.

ಯಕ್ಷಗಾನದೊಂದಿಗೆ ರಂಗಭೂಮಿಯ ಒಡನಾಡಿಯಾಗಿಯೂ ಬೆಳೆದು ಬಂದಿರುವ ಯಕ್ಷದೇಗುಲ ಬಿ.ವಿ. ಕಾರಂತ್, ಸಿ.ಜಿ.ಕೆ., ಸುರೇಶ್ ಆನಗಳ್ಳಿ, ಗೋಪಾಲಕೃಷ್ಣ ನಾಯರಿ, ಸುಬ್ರಹ್ಮಣ್ಯ, ಎಲ್. ಕೃಷ್ಣಪ್ಪ ಹೀಗೆ ಮೊದಲಾದವರ ಅನೇಕ ರಂಗಪ್ರಯೋಗಗಳಲ್ಲಿಯೂ ಸಹಕಾರವಿತ್ತಿರುವುದು ಯಕ್ಷದೇಗುಲದ ಖ್ಯಾತಿಗೆ ಕಾರಣವಾಗಿದೆ.

ಯಕ್ಷದೇಗುಲದ ಕೆ. ಮೋಹನ್ ಹೊಳ್ಳ.
ದೇಶದಾದ್ಯಂತ ಯಕ್ಷಗಾನ ಪ್ರದರ್ಶನ ನೀಡಿರುವ “ಯಕ್ಷದೇಗುಲ” ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯ್ಕೆಗೊಂಡು 2000ನೇ ಇಸ್ವಿಯಲ್ಲಿ ಅಮೇರಿಕಾದ ಹೂಸ್ಟನ್ ಹಾಗೂ ಇಂಗ್ಲೆಂಡಿನ ಮ್ಯಾಂಚೆಸ್ಟರ್‌ನಲ್ಲಿ ನಡೆದ ಸಹಸ್ರಮಾನದ ವಿಶ್ವಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿ 70 ದಿವಸದ ಕಾಲ ಅಮೇರಿಕ ಮತ್ತು ಇಂಗ್ಲೆಂಡ್‌ನಲ್ಲಿ ಪ್ರವಾಸ ಮಾಡಿ 20ಕ್ಕೂ ಹೆಚ್ಚು ಪ್ರದರ್ಶನ ನೀಡಿ ಯಶಸ್ವಿ ತಿರುಗಾಟ ಮಾಡಿದೆ.

ಒಂದು ಮುಖ್ಯ ಉದ್ದೇಶ ಸಾಧನೆಗಾಗಿ ಯಕ್ಷಗಾನ ಕಲೆ ಬಳಕೆಯಾಗುತ್ತಿರುವುದು ಹೆಮ್ಮೆಯ ಸಂಗತಿ. ಏಯ್ಡ್ಸ್, ಆರೋಗ್ಯ ಅರಿವು, ಭಾರತ್ ನಿರ್ಮಾಣ್, ಪಲ್ಸ್ ಪೋಲಿಯೋ, ಅಯೋಡಿನ್ ಉಪ್ಪು, ಗ್ರಾಮೀಣ ಆರೋಗ್ಯ, ಆಹಾರ ಭದ್ರತಾ ಯೋಜನೆ, ಗ್ರಾಮೀಣಾಭಿವೃದ್ಧಿ ಹೀಗೆ ಹಲವು ವಿಷಯದ ಬಗ್ಗೆ ಜನರಿಗೆ ಅರಿವು ಮೂಡಿಸುವ ಯಕ್ಷಗಾನ ಪ್ರಸಂಗಗಳು ಸಿದ್ಧಗೊಳಿಸಿ ಪ್ರದರ್ಶನಗಳನ್ನು ಕರ್ನಾಟಕದ ಎಲ್ಲಾ ಜಿಲ್ಲೆಯ ಆಯ್ದ ಗ್ರಾಮಗಳಲ್ಲಿ 3000ಕ್ಕೂ ಹೆಚ್ಚು ಪ್ರದರ್ಶನ ನೀಡಿರುವುದು ಯಕ್ಷದೇಗುಲದ ಸಾಧನೆಯಾಗಿದೆ. ಇದರಿಂದಾಗಿ ಅರಿವು ಮೂಡಿಸುವುದರ ಜೊತೆಗೆ ಯಕ್ಷಗಾನ ಗೊತ್ತಿರದ ಭಾಗದಲ್ಲೂ ಕೂಡ ತನ್ನ ಅಸ್ತಿತ್ವವನ್ನು ಪ್ರಚಾರಗೊಳಿಸುವಂತೆ ಮಾಡಿದೆ.

ಯಕ್ಷಗಾನದ ದೀರ್ಘಾವಧಿಯನ್ನು ಸಂಕುಚಿತಗೊಳಿಸಿ ಸಂಘಟಕರ ಆಶಯಾನುಸಾರವಾಗಿ ಅತಿ ಕಡಿಮೆ ಅವಧಿಯಲ್ಲಯೂ ಯಕ್ಷಗಾನದ ಪೂರ್ಣ ಸೊಬಗನ್ನು ತೋರುವಂತೆ ಯಕ್ಷಗಾನ ಪ್ರಸಂಗಗಳನ್ನು ಸಿದ್ಧಪಡಿಸಿ ವಿದೇಶಿಯರಿಗಾಗಿಯೇ ೨೦೦ಕ್ಕೂ ಹೆಚ್ಚು ಯಕ್ಷಗಾನ ಪ್ರದರ್ಶನ ನೀಡಿರುವುದು ಯಕ್ಷದೇಗುಲದ ಹೆಮ್ಮೆಯ ವಿಚಾರ.

ಯಕ್ಷಗಾನ ಪ್ರೇಕ್ಷಕರೆದುರು ಯಕ್ಷಗಾನ ಪ್ರದರ್ಶನ ನೀಡಿ ಆಕರ್ಷಿಸುವುದು ಸುಲಭ. ಆದರೆ ಆ ಪ್ರೇಕ್ಷಕರನ್ನು ಮೆಚ್ಚಿಸುವ ಜೊತೆಗೆ ಯಕ್ಷಗಾನ ಪ್ರಚಲಿತವಿಲ್ಲದ ಕರ್ನಾಟಕದ 1500ಕ್ಕೂ ಹೆಚ್ಚು ಹಳ್ಳಿ ಹಳ್ಳಿಯಲ್ಲಿಯೂ ಅದನ್ನು ಪರಿಚಹಿಸಿದ ಜೊತೆಗೆ ಮೂಲಭೂತ ಸೌಲಭ್ಯಗಳನ್ನೇ ಕಾಣದ ಹಳ್ಳಿಯಲ್ಲೂ ಯಕ್ಷಗಾನದ ಚಂಡೆ ಮೊಳಗಿಸಿದ ಕೀರ್ತಿ ಯಕ್ಷದೇಗುಲಕ್ಕೆ ಸಲ್ಲುತ್ತದೆಂದರೆ ತಪ್ಪಾಗಲಿಕ್ಕಿಲ್ಲ.

ಈ 32 ವರ್ಷದಲ್ಲಿ ಯಕ್ಷದೇಗುಲಕ್ಕೆ ಹಲವಾರು ಕಲಾವಿಧರು ಬಂದು ಹೋಗಿದ್ದಾರೆ. ಸ್ವಂತ ವೇಷಭೂಷಣ, ಸೌಂಡ್ಸ್ ಮತ್ತು ಲೈಟ್ ಹೊಂದಿರುವ ಯಕ್ಷದೇಗುಲದಲ್ಲಿ ಸುದರ್ಶನ ಉರಾಳರ ವ್ಯವಸ್ಥಾಪಕದಲ್ಲಿ ಉದಯ ಹೆಗಡೆ, ತಮ್ಮಣ್ಣ ಗಾಂವ್ಕರ್, ಗಣೇಶ ಉಪ್ಪುಂದ, ನರಸಿಂಹ ತುಂಗ, ಗಣಪತಿ ಹೆಗಡೆ, ಲಂಬೋದರ ಹೆಗಡೆ, ದೇವರಾಜದಾಸ್, ಗಣಪತಿ ಎಸ್.ಭಟ್, ಮಾಧವ, ಮಂಜುನಾಥ ಭಟ್, ವಿಶ್ವನಾಥ ಶೆಟ್ಟಿ, ಉದಯ ಬೋವಿ, ರಮೇಶ ಶೆಟ್ಟಿ, ನಾಗರಾಜ ಎಸ್., ಭಾಲಕೃಷ್ಣ ಭಟ್, ಕೆ. ಮೋಹನ್ ಮೊದಲಾದ ಕಲಾವಿಧರನ್ನು ಹೊಂದಿದ್ದಾರೆ.

ವಾರದ 2 ದಿವಸ ಬೆಂಗಳುರಿನ ತ್ಯಾಗರಾಜನಗರದಲ್ಲಿರುವ ಯಕ್ಷದೇಗುಲದಲ್ಲಿ ಕಿರಿಯ ಮತ್ತು ಹಿರಿಯ ವಿದ್ಯಾರ್ಥಿಗಳಿಗೆ ಯಕ್ಷಗಾನ ನೃತ್ಯ ತರಬೇತಿಯನ್ನು ನೀಡಲಾಗುತ್ತದೆ.

ಈ ವರೆಗಿನ ಯಕ್ಷದೇಗುಲದ ಮೈಲಿಗಲ್ಲೆನಿಸಿರುವ ವಿಶೇಷ ಕಾರ್ಯಕ್ರಮಗಳು ಅನೇಕ. ಅವುಗಳಲ್ಲಿಯೂ ಪ್ರಮುಖವೆನಿಸಿದ ಕೆಲವುದನ್ನು ಹೀಗೆ ಪಟ್ಟಿ ಮಾಡಬಹುದು.

  1. ದಿ. ರಾಮಚಂದ್ರ ನಾವುಡ, ಕುಂಜಾಲು ರಾಮಕೃಷ್ಣ ನಾಯಕ್, ಗೋರ್ಪಾಡಿ ವಿಠಲ ಪಾಟೀಲ್, ಕಾಂತಪ್ಪ ಮಾಸ್ತರ್, ಸುಬ್ಬಣ್ಣ ಭಟ್, ಐರೋಡಿ ಸದಾನಂದ ಹೆಬ್ಬಾರ್, ಹಾರಾಡಿ ಮಹಾಬಲ, ಚಿಟ್ಟಾಣಿ ರಾಮಚಂದ್ರ ಹೆಗಡೆ, ತಿಮ್ಮಣ್ಣ ಯಾಜಿ, ಸುಂದರ ಪೂಜಾರಿ, ಮಂಜಯ್ಯ ಶೆಟ್ಟಿ ಮೊದಲಾದ ಯಕ್ಷಗಾನ ಕಲಾವಿದರಿಗೆ ತಲಾ ರೂ.5,000/-ಕ್ಕೂ ಹೆಚ್ಚು ಮೌಲ್ಯದ ನಗದು ಹಾಗೂ ಚಿನ್ನಾಭರಣಗಳೊಂದಿಗೆ ಸನ್ಮಾನ. ಕಳೆದ ನಾಲ್ಕು ವರ್ಷದಿಂದ ಸುಬ್ರಾಯ ಮಲ್ಯ ಹಾಗೂ ಜಂಬೂರು ರಾಮಚಂದ್ರ ಶ್ಯಾನುಭೋಗರು, ಗಣಪತಿ ಪೆಟ್ಟಿಗೆ ಬಾಬು, ಹೆರಂಜಾಲು ಸುಬ್ಬಣ್ಣ ಗಾಣಿಗ, ಬೆಲ್ತೂರು ರಮೇಶ,ಬನ್ನಂಜೆ ಸಂಜೀವ ಸುವರ್ಣ, 10,000/- ನಗದು ಪುರಸ್ಕಾರದೊಂದಿಗೆ ಸನ್ಮಾನಿಸಲಾಯಿತು.

  2. ಕಳೆದ 25 ವರ್ಷದಿಂದ ಭಾರತ ಸರ್ಕಾರದ ಸಂಗೀತ ಮತ್ತು ನಾಟಕ ವಿಭಾಗದಲ್ಲಿ ‘ಎ’ ಶ್ರೇಣಿಯ ತಂಡವಾಗಿ ರಾಜ್ಯಾದ್ಯಂತ ವರ್ಷಕ್ಕೆ 100ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಸಾಮಾಜಿಕ ಜನಜಾಗೃತಿಯನ್ನು ಮೂಡಿಸುವ ಯಕ್ಷಗಾನ ಪ್ರಸಂಗ ‘ಇಳೆಯಣ್ಣನ ಕಥೆ’ ಯನ್ನು 1300ಕ್ಕೂ ಹೆಚ್ಚು ಬಾರಿ ಕರ್ನಾಟಕದಾದ್ಯಂತ ಪ್ರದರ್ಶಿಸಿರುವುದು.

  3. ವಿದ್ಯುನ್ಮಾನ ನಗರ ಯಕ್ಷಗಾನ ಸಪ್ತಾಹ ವಿಶಿಷ್ಟ ಕಾರ್ಯಕ್ರಮ ಸಂಯೋಜಿಸಿ ಒಂದು ವಾರ ಕಾಲ ನಗರದ ವಿವಿಧ ಬಡಾವಣೆಯಲ್ಲಿ ಯಕ್ಷಗಾನ ಪ್ರದರ್ಶನ ‘ಇಳೆಯಣ್ಣನ ಕಥೆ’ ಯಕ್ಷಗಾನ ಪ್ರದರ್ಶನ ಸಂದರ್ಭದಲ್ಲಿ ಅದರಲ್ಲಿ ಭಾಗಿಯಾದ ಸುಮಾರು 20 ಜನ ಕಲಾವಿದರಿಗೆ ಮತ್ತು ಸಂಸದ ಶ್ರೀಯುತ ಅನಂತಕುಮಾರ್ ಅವರಿಂದ ಸನ್ಮಾನ.

  4. ‘ಕಂಸವಧೆ 300 ಎನ್ನುವ ಪೌರಾಣಿಕ ಪ್ರಸಂಗವನ್ನು 300ನೇ ಬಾರಿ ಪ್ರದರ್ಶನ ನೀಡಿರುವ ಸವಿನೆನಪಿಗಾಗಿ ಪ್ರದರ್ಶನ.

  5. ಯಕ್ಷಗಾನದ ಯುಗಪುರುಷ ಶ್ರೀ ಹಾರಾಡಿ ರಾಮ ಗಾಣಿಗರ ಜನ್ಮ ಶತಾಬ್ಧಿಯನ್ನು ಅದ್ದೂರಿಯಾಗಿ ನಗರದಲ್ಲಿ ಸಂಘಟಿಸಿದುದು.

  6. ಹಾರಾಡಿ ರಾಮ ಗಾಣಿಗರ ಕುರಿತಾಗಿ ‘ಯಕ್ಷಲೋಕದ ಕೋಲ್ಮುಂಚು-ಹಾರಾಡಿ ರಾಮ ಗಾಣಿಗ’ ಸ್ಮರಣ ಸಂಚಿಕೆ ಪ್ರಕಟಣೆ.

  7. ‘ಇಳೆಯಣ್ಣನ ಕಥೆ’ ಮತ್ತು ‘ಇಳೆಯಣ್ಣ 1000’ ಪ್ರದರ್ಶನಗಳ ವಿಶೇಷ ಕಾರ್ಯಕ್ರಮಗಳ ಸಂಘಟನೆ.

  8. ಕರ್ನಾಟಕ ವೈಭವ, ಕರ್ನಾಟಕ ಸದ್ಭಾವನಾ ಸಮಾರೋಹ, ಆಂದ್ರ ಸದ್ಭಾವನಾ ಸಮಾರೋಹ, ತಮಿಳುನಾಡು ಸದ್ಭಾವನಾ ಸಮಾರೋಹ, ಅಸ್ಸಾಂ, ಮಿಜೋರಾಂ, ಮಣಿಪುರ, ನಾಗಾಲ್ಯಾಂಡ್ ಸದ್ಭಾವನಾ ಸಮಾರೋಹ, ಡೆಂಕನಾರ್ ಉತ್ಸವ, ಪೂನಾ ಫೆಸ್ಟಿವಾಲ್, ಗಣತಂತ್ರ ಉತ್ಸವ, ಮಲ್ಬಾರ್ ಮಹೋತ್ಸವ, ಮೈಸೂರು ದಸರಾ, ಗಣರಾಜ್ಯೋತ್ಸವ, 50ನೇ ಸ್ವಾತಂತ್ರ್ಯೋತ್ಸವ, ಹಂಪೆ ಉತ್ಸವ, ಮೊದಲಾದ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಯಕ್ಷಗಾನ ಪ್ರದರ್ಶನ ನೀಡಿರುವುದು.

  9. ‘ಯಕ್ಷ ಮತ್ತು ರಂಗ ವಿಜಯ’ ಎನ್ನುವ ಯಕ್ಷಗಾನ ಮತ್ತು ಅದೇ ಕಥೆಯ ರಂಗರೂಪಗಳನ್ನೊಳಗೊಂಡ ಪುಸ್ತಕ ಪ್ರಕಟಣೆ.

  10. ‘ರಂಗಪರಂಪರೆ-ಪ್ರಯೋಗಶೀಲತೆ’ ಎಂಬ ಗೋಪಾಲಕೃಷ್ಣ ನಾಯರಿ ಅವರ ರಂಗ ಪ್ರಯೋಗಗಳ ಕುರಿತಾದ ಪುಸ್ತಕ ಪ್ರಕಟಣೆ.

  11. ಕಲಾಪ್ರಕಾರದ ಮೂಲ ಶಿಕ್ಷಣ ಯೋಜನೆಯಡಿ ಸಿದ್ಧಗೊಂಡ ಚಲನಚಿತ್ರದಲ್ಲಿ ‘ಭರತ ಬಾಹುಬಲಿ’ ಯಕ್ಷಗಾನ ಪ್ರದರ್ಶನ.

  12. ಹೊಸ ಸಹಸ್ರಮಾನದಲ್ಲಿ ಯಕ್ಷಗಾನದ ಪ್ರಸ್ತುತತೆ, ಯಕ್ಷಗಾನದ ನೃತ್ಯ ಸ್ವರೂಪ, ಯಕ್ಷಗಾನ ಉತ್ಸವ, ಯಕ್ಷಗಾನ ಭಾಗವತಿಕೆ, ಯಕ್ಷಗಾನ ಇನ್ನೊಂದು ಪ್ರಕಾರವಾದ ಹೂವಿನಕೋಲು ಕುರಿತಾದ ವಿಚಾರ ಸಂಕಿರಣ - ಪ್ರದರ್ಶನಗಳನ್ನು ನಗರದಲ್ಲಿ ಏರ್ಪಡಿಸಿರುವುದು.

  13. 40ಕ್ಕೂ ಹೆಚ್ಚು ವೈವಿದ್ಯಮಯ ಪೌರಾಣಿಕ ಪ್ರಸಂಗಗಳ ಪ್ರದರ್ಶನ.

  14. ಯಕ್ಷದೇಗುಲದಲ್ಲಿ ಅಭ್ಯಾಸ ಮಾಡಿದ ಬಾಲಕಲಾವಿದ ಶಶಾಂಕ್ ‘ಪೋಗೋ’ ಪ್ರಶಸ್ತಿಯನ್ನು ಗಳಿಸಿದ್ದರೆ, ಪ್ರೀತಿ ಕೆ. ಮೋಹನ್, ‘ಬಾಲ ಶ್ರೀ’ ಪ್ರಶಸ್ತಿಯ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದಳು. ಅಲ್ಲದೆ ಯಕ್ಷದೇಗುಲದಲ್ಲಿ ಕಲಿತ ಕು|| ಅರ್ಪಿತ ಹೆಗ್ಡೆ ಅಮೇರಿಕದಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನಕ್ಕೆ ಸರಕಾರದಿಂದ ಆಯ್ಕೆಯಾಗಿರುವುದು.

  15. ‘ರಾಣಿ ಚೆನ್ನಮ್ಮ’ನ ಜೀವನ ಚರಿತ್ರೆಯನ್ನು ಯಕ್ಷಗಾನಕ್ಕೆ ಅಳವಡಿಸಿ ಪ್ರಸಂಗವಾಗಿಸಿ ರಾಜ್ಯದಾದ್ಯಂತ 15ಕ್ಕೂ ಹೆಚ್ಚುಬಾರಿ ಪ್ರದರ್ಶನ.

  16. ಹತ್ತಾರು ಚಲನಚಿತ್ರಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿ ಪಾಲ್ಗೊಂಡ ಖ್ಯಾತಿ.

  17. ರಾಜಧಾನಿಯಲ್ಲಿ ಯಕ್ಷಗಾನದ ನೃತ್ಯ, ವೇಶಭೂಷಣ, ಭಾಗವತಿಕೆ, ಇತ್ಯಾದಿ ತರಬೇತಿ ಶಿಬಿರ.

  18. ದೊಂಬಿ ದಾಸರ ಗಂಗೆ ಗೌರಿಯರ ಹಗರಣದ ಜಾನಪದ ಪದಗಳನ್ನಾಧರಿಸಿದ ‘ಗಂಗೆ-ಗೌರಿ’ ಯಕ್ಷಗಾನ ಪ್ರಸಂಗ ರಚನೆ ಮತ್ತು ಪ್ರದರ್ಶನ, ‘ದೂತ ವಾಕ್ಯ’, ‘ಮಧ್ಯಮ ವ್ಯಾಯೋಗ’, ‘ಮೃಚ್ಛಕಟಿಕ’, ಮೊದಲಾದ ಯಕ್ಷನಾಟಕ ಪ್ರದರ್ಶನ.

  19. ರಾಜಧಾನಿಯಲ್ಲಿ ಡಾ. ಶಿವರಾಮ ಕಾರಂತರ ಜನ್ಮ ಶತಾಬ್ದಿ ಆಚರಣೆ.

  20. ಏಯ್ಡ್ಸ್ ಕುರಿತಾಗಿಯೇ ಸುಮಾರು 600ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಜನಜಾಗೃತಿಯ ಯಕ್ಷಗಾನ ಪ್ರದರ್ಶನ ಹಾಗೂ ಜನಜಾಗೃತಿಯ ಕುರಿತಾಗಿ 8 ಯಕ್ಷಗಾನ ಪ್ರಸಂಗ ತಯಾರಿ, ಏಯ್ಡ್ಸ್, ಪರಿಸರ ಜಾಗೃತಿ, ಎಚ್1ಎನ್1, ಆಹಾರ ಭದ್ರತಾ ಯೋಜನೆ, ಪೋಲಿಯೋ, ಪೌಷ್ಠಿಕ ಆಹಾರ, ಭಾರತ್ ನಿರ್ಮಾಣ್, ಸರ್ವಶಿಕ್ಷಣ ಅಭಿಯಾನ ಹೀಗೆ ಹಲವು ವಿಷಯದ ಬಗ್ಗೆ ಪ್ರಸಂಗ ತಯಾರಿ ಹಾಗೂ 500ಕ್ಕೂ ಹೆಚ್ಚು ಪ್ರವೇಶಗಳಲ್ಲಿ ೩೦೦೦ಕ್ಕೂ ಹೆಚ್ಚು ಜನಜಾಗೃತಿಯ ಯಕ್ಷಗಾನ ಪ್ರದರ್ಶನ.

  21. ಯಕ್ಷಗಾನವನ್ನು ಚಲನಚಿತ್ರ ಜಾಹೀರಾತು, ವಿವಿಧ ರಂಗಪ್ರಕಾರಗಳೊಂದಿಗೆ, ಕಲಾಮಾಧ್ಯಮ ಮತ್ತು ಪ್ರಚಾರ ಮಾಧ್ಯಮಗಳೊಂದಿಗೆ ಯಕ್ಷಗಾನದ ಚೌಕಟ್ಟಿನಲ್ಲಿ ಮೇಳೈಸಿ, ಬೆಸೆದು ಯಕ್ಷಗಾನಕ್ಕೆ ಪ್ರಚಾರವನ್ನೊದಗಿಸಿದೆ.

  22. ಯಕ್ಷಗಾನದ ‘ನೃತ್ಯಸ್ವರೂಪ’ ಎಂಬ ವಿಷಯದ ಬಗ್ಗೆ ವಿಚಾರ ಸಂಕಿರಣ.

  23. ಕೆಲವು ಪ್ರಮುಖ ಪ್ರಶಸ್ತಿಗಳು 2005ರಲ್ಲಿ ಶ್ರವಣ ಬೆಳಗೊಳದಲ್ಲಿ ಮಹಾಕವಿ ರತ್ನಾಕರವರ್ಣಿ ಆರೀ ಎ.ಆರ್. ನಾಗರಾಜ್ ಪ್ರಶಸ್ತಿ, 2008ರಲ್ಲಿ ಉಡುಪಿಯ ಯಕ್ಷಗಾನ ಕಲಾರಂಗದ ಶ್ರೀ ಶ್ರೀ ವಿಶ್ವೇಶತೀರ್ಥ ಪ್ರಶಸ್ತಿ, 2010ರ ಸಾಲಿನ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸಿ

*********************

ಯಕ್ಷ ಗುರು ಸ೦ಜೀವ ಸುವರ್ಣರವರಿಗೆ ಯಕ್ಷದೇಗುಲದಿ೦ದ ಸನ್ಮಾನ




ಭಾಗವತ ತೋನ್ಸೆ ಆನ೦ದ ಮಾಸ್ತರರಿಗೆ ಯಕ್ಷದೇಗುಲದಿ೦ದ ಸನ್ಮಾನ




ಯಕ್ಷದೇಗುಲದ ಯಕ್ಷಕುಡಿಗಳು




ಮಕ್ಕಳಿಗೆ ಯಕ್ಷಗಾನ ತರಬೇತಿ




ಹೆಣ್ಣುಮಕ್ಕಳಿಗೆ ಗ೦ಡುಕಲೆ ಯಕ್ಷಗಾನದ ತರಬೇತಿ




Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ